Labels

Search :

Friday, July 26, 2013

ಅಲ್ಲಮ ಪ್ರಭುಗಳ ವಚನಗಳು


ಹೊನ್ನು ಮಾಯೆಯೆಂಬರು
ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆಯೆಂಬರು
ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆಯೆಂಬರು
ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಶೆಯೇ ಮಾಯೆ ಕಾಣಾ
ಗುಹೇಶ್ವರ ! ||

ಎತ್ತಣ ಮಾಮರ
ಎತ್ತಣ ಕೋಗಿಲೆ ?
ಎತ್ತಣಿಂದೆತ್ತ ಸಂಬಂಧವಯ್ಯ ?!
ಬೆಟ್ಟದ ನೆಲ್ಲಿಯ ಕಾಯಿ
ಸಮುದ್ರದೊಳಗಣ ಉಪ್ಪು
ಎತ್ತಣಿಂದೆತ್ತ ಸಂಬಂಧವಯ್ಯಾ ?!
ಗುಹೇಶ್ವರಲಿಂಗಕ್ಕೆಯೂ
ಎನಗೆಯೂ
ಎತ್ತಣಿಂದೆತ್ತ ಸಂಬಂಧವಯ್ಯ ?! ||

ಬೆಟ್ಟಕ್ಕೆ ಚಳಿಯಾದಡೆ
ಏನ ಹೊದಿಸುವಿರಯ್ಯ !
ಬಯಲು ಬತ್ತಲೆಯಾದಡೆ
ಏನನುಡಿಸುವರಯ್ಯ ?
ಭಕ್ತನು ಭವಿಯಾದಡೆ
ಏನನುಪಮಿಸುವೆನಯ್ಯ – ಗುಹೇಶ್ವರ ? ||


ಲಿಂಗ ಒಳಗೋ ಹೊಱಗೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಎಡನೋ ಬಲನೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಮುಂದೋ ಹಿಂದೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಸ್ಥೂಲವೋ ಸೂಕ್ಷ್ಮವೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಪ್ರಾಣವೋ, ಪ್ರಾಣ ಲಿಂಗವೋ ?
ಬಲ್ಲಡೆ ನೀವು ಹೇಳಿರೇ ? ಗುಹೇಶ್ವರ ||

No comments:

Post a Comment

Related Posts Plugin for WordPress, Blogger...
Related Posts Plugin for WordPress, Blogger...

Search More....

2014-2015-2016